ಜಗನ್ನಾಥ ದಾಸ
(ಕ್ರಿ.ಶ.1728-1809). ಕನ್ನಡನಾಡಿನ ಹರಿದಾಸರಲ್ಲಿ ಪ್ರಮುಖ. ಆಧ್ಯಾತ್ಮಿಕ ಸಾಹಿತ್ಯವನ್ನು ಶ್ರೀಮಂತಗೊಳಿಸಿದವ. ಪುರಂದರದಾಸ, ವಿಜಯದಾಸ, ಗೋಪಾಲದಾಸ ಮತ್ತು ಜಗನ್ನಾಥದಾಸರನ್ನು ಒಟ್ಟಿಗೆ ದಾಸಚತುಷ್ಟಯರೆಂದು ನಿರ್ದೇಶಿಸುವ ಸಂಪ್ರದಾಯ ಉಂಟು. ಜಗನ್ನಾಥದಾಸನನ್ನು ತನ್ನ ಅಪರೋಕ್ಷ ಜ್ಞಾನದಿಂದ ರಂಗನೊಲಿದ ದಾಸ ಎಂದೂ ರಂಗೋಲೆ ಹಾಕುವ ಕಲಾ ಪರಿಣತಿಯಿದ್ದುದರಿಂದ ರಂಗೋಲಿದಾಸ ಎಂದೂ ಕರೆಯಲಾಗುತ್ತಿತ್ತು.

	ಈತ ಹುಟ್ಟಿದೂರು ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯಲ್ಲಿರುವ ಮಾನ್ವಿಯಿಂದ ಹದಿನೈದು ಕಿ.ಮೀ. ದೂರದಲ್ಲಿರುವ ಬ್ಯಾಗವಟ್ಟಿ. ಈತ ಬಹುಕಾಲ ವಾಸವಾಗಿದ್ದುದು ಮಾನ್ವಿಯಲ್ಲಿ. ಈತನ ಮನೆಯೇ ಈ ಈತನ ಗುಡಿಯಾಗಿದೆ. ಮಾನ್ವಿ ತಾಲ್ಲೂಕಿನಲ್ಲೂ ಧಾರವಾಡ ಜಿಲ್ಲೆಯ ಹಾವೇರಿಯಲ್ಲೂ ಈತನಿಗೆ ಸೇರಿದ ಇನ್ನೊಂದು ಮನೆ ಮತ್ತು ಜಮೀನು ಇದೆ. ಈತ ಆ ಭಾಗಗಳಲ್ಲಿ ಸವಣೂರಿನ ಸತ್ಯಭೋದ, ಮಾದನೂರಿನ ವಿಷ್ಣುತೀರ್ಥ ಮತ್ತು ರಿತ್ತಿಯ ಧೀರೇಂದ್ರತೀರ್ಥ ಇವರೊಂದಿಗೆ ಇರುತ್ತಿದ್ದ.

	ಜಗನ್ನಾಥನ ಜೀವನ ಕಥೆಯೇ ಒಂದು ಪವಾಡದಂತಿದೆ. ಈತನ ಪೂರ್ವಶ್ರಮದ ಹೆಸರು ಶ್ರೀನಿವಾಸಾಚಾರ್ಯ. ಆಶುಕವಿತ್ವ ಶಕ್ತಿಯುಳ್ಳ ಈತ ಮಂತ್ರಾಲಯದ ಶ್ರೀವರದೇಂದ್ರ ತೀರ್ಥಸ್ವಾಮಿಗಳಲ್ಲಿ ವಿದ್ಯಾಭ್ಯಾಸ ಮಾಡಿ ಶಾಸ್ತ್ರಪಾರಂಗತನಾದ. ಅನಂತರ ಆಚಾರ್ಯಪಟ್ಟವನ್ನೂ ಏರಿದ.

	ಆ ಕಾಲದಲ್ಲಿ ಚೀಕಲಪರವಿ (ನೋಡಿ- ಚೀಕಲಪರವಿ) ವಿಜಯದಾಸ ಹರಿದಾಸರಲ್ಲಿ ಹಿರಿಯನೆಂದೂ ಅಪರೋಕ್ಷ ಜ್ಞಾನಿಯೆಂದೂ ಪ್ರಸಿದ್ಧನಾಗಿದ್ದರೂ ಅವನ ವಿಚಾರದಲ್ಲಿ ಜಗನ್ನಾಥನಿಗೆ ತಾತ್ಸಾರ ಮತ್ತು ತಿರಸ್ಕಾರ. ವಿಜಯದಾಸನನ್ನು ಹಳಿದುದರ ಪರಿಣಾಮವಾಗಿ ಜಗನ್ನಾಥ ಬಹುಕಾಲ ಉದರ ವ್ಯಾಧಿಯಿಂದ ನರಳಿದ. ಅನಂತರ ಸ್ವಪ್ನದಲ್ಲಿ ಆದ ಶ್ರೀಹರಿಯ ಸೂಚನೆಯಂತೆ ವಿಜಯದಾಸನನ್ನು ಮರೆಹೊಕ್ಕ. ವಿಜಯದಾಸ ತನ್ನ ಶಿಷ್ಯ ಗೋಪಾಲದಾಸನಿಂದ ಜಗನ್ನಾಥದಾಸನ ಉದರ ರೋಗನಿವಾರಣೆ ಮಾಡಿಸಿದ. ಅಷ್ಟೇ ಅಲ್ಲದೆ ನಲವತ್ತು ವರ್ಷಗಳಷ್ಟು ಆಯಸ್ಸನ್ನು ಆತನಿಗೆ ಧಾರೆಯೆರೆಸಿದ. ಗೋಪಾಲದಾಸನ ಸೂಚನೆಯ ಮೇರೆ ಜಗನ್ನಾಥದಾಸ ಪಂಢರಪುರಕ್ಕೆ ಹೋಗಿ ಚಂದ್ರಭಾಗ ನದಿಯಲ್ಲಿ ಮಿಂದಾಗ ವಿಟ್ಠಲ ಎಂಬ ಅಂಕಿತವಿದ್ದ ಶಿಲೆ ದೈವದತ್ತವಾಗಿ ದೊರೆತು ಅಂದಿನಿಂದ ತನ್ನ ಪೂರ್ವಾಶ್ರಮದ ಹೆಸರನ್ನು ಕಿತ್ತುಹಾಕಿ ಜಗನ್ನಾಥದಾಸ ಎಂದು ಪ್ರಸಿದ್ಧನಾದ.

	ಈ ಅಂಕಿತದಿಂದ ಜಗನ್ನಾಥದಾಸ ಅನೇಕ ಅಮೂಲ್ಯ ಕೃತಿಗಳನ್ನು ರಚಿಸಿದ್ದಾನೆ. ಈತನ ಕೃತಿಗಳಲ್ಲಿ ಅತ್ಯಂತ ಪ್ರಮುಖವೂ ಜನಪ್ರಿಯವೂ ಆದುದು ಶ್ರೀಹರಿಕಥಾಮೃತಸಾರ. ಇದು ಭಾಮಿನೀ ಷಟ್ಪದಿಯಲ್ಲಿದ್ದು ಸಾವಿರಪದ್ಯಗಳ ಪ್ರಮೇಯ ಪುಂಜವಾದ ಮಹಾಗ್ರಂಥವೆನಿಸಿದೆ. ಅಲ್ಲದೆ ಈತ ಸಹಸ್ರಾರು ಸುವ್ವಾಲಿ, ಕೀರ್ತನೆ ಸುಳಾದಿಗಳನ್ನು ರಚಿಸಿದ್ದಾನೆ. ಈಗ ಸುಮಾರು ಐನೂರು ಸುವ್ವಾಲಿಗಳೂ ಇನ್ನೂರು ಸುಳಾದಿಗಳೂ ಉಪಲಬ್ಧವಿದೆ. ಈ ಕೃತಿಗಳಲ್ಲಿ ಈತನ ಪಾಂಡಿತ್ಯ ಚೆನ್ನಾಗಿ ವ್ಯಕ್ತವಾಗುತ್ತದೆ. ಒಂದು ಕಡೆ ಸಂಸ್ಕøತ ಭೂಯಿಷ್ಠ ಶೈಲಿ ಮತ್ತೊಂದು ಕಡೆ ಸರಳ ಸುಂದರ ಶೈಲಿ ಈ ಎರಡೂ ಈತನ ಕೃತಿಗಳಲ್ಲಿವೆ. ಅಪೂರ್ವ ಪದಬಂಧ, ನಿರರ್ಗಳ ಶೈಲಿಯ ಓಟ, ಅಸಾಧಾರಣ ಶಾಸ್ತ್ರಜ್ಞಾನ, ವಿಷಯ ವೈವಿಧ್ಯ, ಆಳವಾದ ಭಕ್ತಿ, ಅರ್ಥ ಗಾಂಭೀರ್ಯ, ಸಿದ್ಧಾಂತದ ಸಮರ್ಥ ಪ್ರತಿಪಾದನೆಗಳಿಂದ ಈತನ ಕೃತಿಗಳು ತುಂಬಿವೆ. ಕವಿಯ ಪ್ರತಿಭೆ ಅಭ್ಯಾಸ ಜ್ಞಾನ ಮೇಧಾಶಕ್ತಿಗಳನ್ನು ಇಲ್ಲಿ ಚೆನ್ನಾಗಿ ಗುರುತಿಸಬಹುದು.

	ಹರಿಕಥಾಮೃತಸಾರ ಕನ್ನಡ ನಾಡಿನಲ್ಲಿ ಅಲ್ಲದೆ ನೆರೆಯ ಪ್ರಾಂತ್ಯಗಳಲ್ಲೂ ತುಂಬ ಜನಪ್ರಿಯವಾಗಿದೆ. ಇದರ ಹತ್ತೊಂಬತ್ತು ವಿವಿಧ ಮುದ್ರಣಗಳಿವೆ. ಹಲವು ಅನುವಾದಗಳೂ ವ್ಯಾಖ್ಯಾನಗಳೂ ಇವೆ. ಸಂಸ್ಕøತ ಭಾಷೆಯಲ್ಲಿ ಗ್ರಂಥಕ್ಕೆ ಟೀಕೆಯನ್ನು ರಚಿಸಲಾಗಿದೆ. ಈಚೆಗೆ ಇದು ಇಂಗ್ಲಿಷ್‍ಗೂ ಭಾಷಾಂತರವಾಗಿದೆ.

	ಜಗನ್ನಾಥದಾಸನ - ರಂಗ ನಿನ್ನ ಕೊಂಡಾಡುವ, ದಾಸೋಹಂ ತವ ದಾಸೋಹಂ, ಶ್ರೀವೆಂಕಟಶೈಲಾಧಿಪ ನಮೋ, ಶ್ರೀನಿಕೇತನ, ಏಕೆ ಮೂಕನಾದ್ಯೊ, ನೀಲೋಹಿತ, ಆಶನವಸನಗಳೀವ, ದುರಿತವನಕುಠಾರಿ ಮೊದಲಾದ ಕೀರ್ತನೆಗಳು ಸುವ್ವಾಲಿಗಳು, ಸುಳಾದಿಗಳು, ಭಕ್ತಿ ಜ್ಞಾನಭರಿತವಾದ ನೂರಾರು ಷಟ್ಪದಿಗಳೂ ಜನಮನದಲ್ಲಿ ಹಚ್ಚಹಸುರಾಗಿ ಈಗಲೂ ನಿಂತಿವೆ.
(ಕೆ.ಎಂ.ಕೆ.ಆರ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ